ಚೌಸಿಂಗಿ
ಆರ್ಟಿಯೊಡ್ಯಾಕ್ಟಿಲ ಗಣದ ಬೋವಿಡೀ ಕುಟುಂಬಕ್ಕೆ ಸೇರಿದ ಒಂದು ಜಿಂಕೆ. ಇದರ ತವರು ಭಾರತ. ಟೆಟ್ರಸೆರಸ್ ಕ್ವಾಡಿಕಾರ್ನಿಸ್ ಶಾಸ್ತ್ರೀಯ ಹೆಸರು. ಭಾರತದಲ್ಲಿ ಗಂಗಾನದಿಯ ಬಯಲು ಮತ್ತು ಕೇರಳದ ಕರಾವಳಿ ಪ್ರದೇಶಗಳನ್ನು ಬಿಟ್ಟರೆ, ಉಳಿದ ಭಾಗಗಳಲ್ಲಿ ಇದು ಕಂಡುಬರುತ್ತದೆ. ದಟ್ಟ ಕಾಡುಗಳಿಗಿಂತ ಕುರುಚಲು ಕಾಡೇ ಇದಕ್ಕೆ ಬಲು ಇಷ್ಟ. ಚಿಕ್ಕಗಾತ್ರದ ಜಿಂಕೆಯಿದು. ತಲೆಯೂ ಸೇರಿ ದೇಹದ ಉದ್ದ ಸು. 1 ಮೀ. ಎತ್ತರ (ಭುಜದ ಬಳಿ) ಸು. 0.6 ಮೀ. ತೂಕ ಸು. 17-20 ಕಿ.ಗ್ರಾಂ. ಬಣ್ಣ ಕಂದು, ಕಾಲುಗಳ ಒಳಭಾಗ ಮತ್ತು ಹೊಟ್ಟೆ ಬಿಳಿ ಬಣ್ಣಕ್ಕಿವೆ. ಗಂಡು ಜಿಂಕೆಯ ನೆತ್ತಿಯ ಮೇಲೆ ಒಂದು ಜೊತೆ ಮತ್ತು ಹಣೆಯ ಮೇಲೆ ಒಂದು ಜೊತೆ-ಹೀಗೆ ಒಟ್ಟು 2 ಜೊತೆ ಕೊಂಬುಗಳಿವೆ. ಹೀಗೆ ನಾಲ್ಕು ಕೊಂಬಿರುವುದರಿಂದಲೇ ಇದಕ್ಕೆ ಚೌಸಿಂಗ್ ಎಂದು ಹೆಸರು. ನೆತ್ತಿಯ ಮೇಲಿನ ಕೊಂಬುಗಳು ದೊಡ್ಡವು; ಇವುಗಳ ಉದ್ದ 80-100ಮಿ.ಮೀ. ಹಣೆಯ ಮೇಲಿನವು ಚಿಕ್ಕವು; ಇವುಗಳ ಉದ್ದ 25-38ಮೀ.ಮೀ. ಇವಕ್ಕೆ ನಾಲ್ಕು ಕೊಂಬುಗಳಿವೆಯಾಗಿ ಇವು ಇತರ ಬಗೆಯ ಜಿಂಕೆಗಳಿಂದ ಭಿನ್ನವಾಗಿವೆ. ಹೆಣ್ಣುಗಳಿಗೆ ಕೊಂಬುಗಳೇ ಇಲ್ಲ.

	ಚೌಸಿಂಗ್  ಸಂಘ ಜೀವಿಯಲ್ಲ. ಸಾಮಾನ್ಯವಾಗಿ ಜೋಡಿಗಳಲ್ಲಿ ಮಾತ್ರ ಕಾಣಸಿಗುತ್ತದೆ. ಅಲ್ಲದೆ ಇದು ತುಂಬ ನಾಚಿಕೆ ಸ್ವಭಾವದ ಪ್ರಾಣಿಯೂ ಹೌದು. ಅಪಾಯದ ಸುಳಿವು ಸ್ವಲ್ಪ ಸಿಕ್ಕರೂ ಸಾಕೂ ಕ್ಷಣಾರ್ಧದಲ್ಲಿ ಹತ್ತಿರದ ಪೊದೆಯೊಳಗೆ ನೆಗೆದು ಮರೆಯಾಗುತ್ತದೆ. ಹೀಗಾಗಿ ಕಾಡಿನಲ್ಲಿ ಇದು ಕಾಣಸಿಗುವುದೇ ದುರ್ಲಭ. ಇದು ಒಂದು ವಿಚಿತ್ರ ರೀತಿಯ ಕುಲುಕು ಕ್ರಮದಲ್ಲಿ ನಡೆಯುತ್ತದೆ. ಹುಲ್ಲು ಇದರ ಮುಖ್ಯ ಆಹಾರ.

	ಹೆಣ್ಣು ಗಂಡುಗಳು ಕೂಡುವ ಕಾಲ ಜೂನ್-ಜುಲೈ. ಸು. 183 ದಿವಸಗಳ ಗರ್ಭಾವಧಿಯ ಅನಂತರ ಸೂಲಿಗೆ 1-3 ಮರಿಗಳು ಹುಟ್ಟುತ್ತವೆ. ಚೌಸಿಂಗಿಯನ್ನು ಸಾಕುವುದುಂಟು.
(ಎಸ್.ಪಿ.ಎಂ)

	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ